 ಕ್ರೆಬ್ಸ್ ಸರ್ ಹ್ಯಾನ್ಸ್ ಅಡಾಲ್ಫ್
	1900- . ಬ್ರಿಟಿಷ್ ಜೀವ ರಸಾಯನ ವಿಜ್ಞಾನಿ. ವಿದ್ಯಾರ್ಥಿ ದೆಸೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದ. ಆದರೆ ಆಸಕ್ತಿ ಕುದುರಿದ್ದು ಜೀವ ರಸಾಯನ ವಿಜ್ಞಾನದಲ್ಲಿ. ದೇಹದಲ್ಲಿ ಅಮೈನೊ ಆಮ್ಲಗಳು ಮತ್ತು ಕಾರ್ಬೊಹೈಡ್ರೇಟುಗಳು ಹೊಂದುವ ರಾಸಾಯನಿಕ ಪರಿವರ್ತನೆಗಳ ಪಥಗಳ ಬಗ್ಗೆ ಸಂಶೋಧನೆಗಳನ್ನು ಕೈಗೊಂಡು ಮೂಲಭೂತ ಆವಿಷ್ಕಾರಗಳನ್ನು ಮಾಡಿದ್ದಕ್ಕಾಗಿ ನೊಬೆಲ್ ಬಹುಮಾನವನ್ನು ಪಡೆದ (1953).

	1900ರ ಆಗಸ್ಟ್ 25ರಂದು ಜರ್ಮನಿಯ ಹಿಲ್ಡೆಷೈಮಿನಲ್ಲಿ ಜನಿಸಿದ ಕ್ರೆಬ್ಸ್ 1919ರಿಂದ 1925ರ ವರೆಗೆ ಬೇರೆ ಬೇರೆ ಜರ್ಮನ್ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದು 1925ರಲ್ಲಿ ಹ್ಯಾಂಬರ್ಗ್ ವಿಶ್ವವಿದ್ಯಾಲಯದ ವೈದ್ಯಕೀಯ ಡಿಗ್ರಿಯನ್ನು ಗಳಿಸಿದ. ಅದಾದ ಬಳಿಕ ರಸಾಯನ ವಿಜ್ಞಾನವನ್ನು ಅಭ್ಯಸಿಸಿ ಬರ್ಲಿನ್-ಡಾಲೆಮಿನಲ್ಲಿ, ನೊಬೆಲ್ ಪ್ರಶಸ್ತಿ ವಿಜೇತ ವಾರ್ಬುರ್ಗನ ಸಹಾಯಕನಾಗಿ ಈತ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ. ತರುವಾಯ ಕೆಲಕಾಲ ವೈದ್ಯಶಾಸ್ತ್ರಕ್ಕೆ ಹಿಂತಿರುಗಿ ವೈದ್ಯಕೀಯ ಶಿಕ್ಷಕನಾಗಿದ್ದ. ನಾಟ್ಸಿಗಳು ಅಧಿಕಾರಕ್ಕೆ ಬಂದು ಪ್ರಬಲರಾಗಿದ್ದಾಗ ಕ್ರೆಬ್ಸ್ ಜವರ್iನಿಯನ್ನು ತೊರೆದು ನಿರಾಶ್ರಿತನಾಗಿ ಬ್ರಿಟನ್ನಿಗೆ ವಲಸೆ ಹೋಗಬೇಕಾಯಿತು. 1933ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಜೀವರಸಾಯನ ವಿಜ್ಞಾನ ವಿಭಾಗವನ್ನು ಸೇರಿ ಎರಡು ವರ್ಷಗಳ ಮೇಲೆ ಷೆಫೀಲ್ಡ್ ವಿಶ್ವವಿದ್ಯಾಲಯಕ್ಕೆ ಹೋದ (1935). 1954ರಲ್ಲಿ ಕ್ರೆಬ್ಸ್ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಜೀವ ರಸಾಯನ ವಿಭಾಗದ ಪ್ರಾಧ್ಯಾಪಕನಾದ. 1947ರಲ್ಲಿ ಈತ ರಾಯಲ್ ಸೊಸೈಟಿಯ ಫೆಲೊ ಆಗಿ ಚುನಾಯಿತನಾದ. 1958ರಲ್ಲಿ ಬ್ರಿಟಿಷ್ ಸರ್ಕಾರ ಇವನಿಗೆ ನೈಟ್ ಪದವಿ ನೀಡಿ ಗೌರವಿಸಿತು. 1964ರಲ್ಲಿ ಅಮೆರಿಕದ ನ್ಯಾಷನಲ್ ಅಕಾಡಮಿ ಆಫ್ ಸೈನ್ಸಸ್ ಕ್ರೆಬ್ಸ್‍ನನ್ನು ತನ್ನ ಓರ್ವ ವಿದೇಶೀ ಸದಸ್ಯನನ್ನಾಗಿ ಚುನಾಯಿಸಿ ಸನ್ಮಾನಿಸಿತು.

	ಆಹಾರದ ಮೂಲಕ ದೇಹವನ್ನು ಪ್ರವೇಶಿಸುವ ಪ್ರೋಟೀನುಗಳು ಜಲವಿಭಜನೆ (ಹೈಡ್ರಾಲಿಸಿಸ್) ಹೊಂದಿ ಅಮೈನೊ ಆಮ್ಲಗಳಾದ ಬಳಿಕ ಆ ಅಮೈನೊ ಆಮ್ಲಗಳು ದೇಹಕ್ಕೆ ಅಗತ್ಯವಾದ ವಿವಿಧ ಪ್ರೋಟೀನುಗಳ ಸಂಶ್ಲೇಷಣೆಯಲ್ಲಿ ಉಪಯೋಗ ಪಡೆಯುವುದು ಸರಿಯಷ್ಟೆ. ಕೆಲವು ವೇಳೆ ಅವು ಉತ್ಕರ್ಷಣೆ ಹೊಂದಿ ಶಕ್ತಿಯನ್ನು ಒದಗಿಸುವುದೂ ಉಂಟು. ಅಂಥ ಸಂದರ್ಭಗಳಲ್ಲಿ ಅಮೈನೊ ಆಮ್ಲಗಳಲ್ಲಿನ —ಓಊ2 ಗುಂಪು ಮೊದಲು ಬಿಡುಗಡೆಯಾಗಬೇಕು. ಹಾಗೆ ಬಿಡುಗಡೆಯಾದ —ಓಊ2 ಯೂರಿಂiÀi ರೂಪದಲ್ಲಿ ದೇಹದಿಂದ ಹೊರಬರುವುದು. ಇದು ನಡೆಯುವುದು ಹೇಗೆ ಎಂಬುದರ ಬಗ್ಗೆ ಕ್ರೆಬ್ಸ್ ಕುತೂಹಲ ತಳೆದು ಅದಕ್ಕೆ ಸಂಬಂಧಿಸಿದ ರಾಸಾಯನಿಕ ಕ್ರಿಯೆಗಳ ಪಥಗಳ ಪತ್ತೆ ಹಚ್ಚಿದ. ಆರ್ನಿಥೀನ್ ಎಂಬ ಅಮೈನೊ ಆಮ್ಲ ಅಮೋನಿಯ ಮತ್ತು ಕಾರ್ಬನ್ ಆಕ್ಸೈಡುಗಳನ್ನು ತೆಗೆದುಕೊಂಡು ಮೊದಲು ಸಿಟ್ರುಲ್ಲೀನ್ ಆಗಿ ಅದು ಇನ್ನೊಂದು ಅಮೋನಿಯ ಅಣುವನ್ನು ತೆಗೆದುಕೊಂಡು ಅರ್ಜಿನೀನ್ ಆಗುವುದೆಂದೂ ಅನಂತರ ಆರ್ಜಿನೀನ್ ವಿಭಜನೆ ಹೊಂದಿ ಯೂರಿಯಾವನ್ನು ನೀಡುವುದಲ್ಲದೆ ಆರ್ನಿಥೀನನ್ನು ಪುನರುತ್ಪಾದಿಸುವುದೆಂದೂ ತೋರಿಸಿದ. ಹಾಗೆ ಉತ್ಪತ್ತಿಯಾದ ಆರ್ನಿಥೀನ್ ಪುನಃ ಇದೇ ಕ್ರಿಯಾ ಸರಣಿಯಲ್ಲಿ ಪಾಲುಗೊಳ್ಳುವುದು. ಹೀಗೆ ಕ್ರಿಯೆಗಳು ಚಕ್ರೀಯವಾಗಿ ಮುಂದುವರಿಯುವುದರಿಂದ ಈ ಕ್ರಿಯಾಸರಣಿಗೆ ಆರ್ನಿಥೀನ್ ಚಕ್ರ ಅಥವಾ ಕ್ರೆಬ್ಸ್ ಯೂರಿಯ ಚಕ್ರ ಎಂಬ ಹೆಸರು ಬಂದಿದೆ.

	ಕ್ರೆಬ್ಸ್ ಜರ್ಮನಿಯನ್ನು ಬಿಟ್ಟು ಬ್ರಿಟನ್ನಿಗೆ ಬಂದ ಬಳಿಕ ಆತನ ಗಮನ ಕಾರ್ಬೊಹೈಡ್ರೇಟುಗಳ ಚಯಾಪಚಯದ (ಮೆಟಬಾಲಿಸಂ) ಕಡೆ ಹರಿಯಿತು. ಕಾರ್ಬೊಹೈಡ್ರೇಟುಗಳು ನಿರ್ದಿಷ್ಟ ಕ್ರಿಯಾಸರಣಿಯನ್ನು ಅನುಸರಿಸಿ ಲ್ಯಾಕ್ಟಿಕ್ ಆಮ್ಲವನ್ನು ಉತ್ಪತ್ತಿ ಮಾಡುವುದು ತಿಳಿದಿತ್ತು. ಲ್ಯಾಕ್ಟಿಕ್ ಆಮ್ಲ ಉತ್ಕರ್ಷಣೆ ಹೊಂದಿ ಅಂತಿಮವಾಗಿ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರನ್ನು ಉತ್ಪತ್ತಿ ಮಾಡುವುದು ಹೇಗೆ ಎಂಬುದು ಗೊತ್ತಿರಲಿಲ್ಲ. ಕ್ರೆಬ್ಸ್ ಇದನ್ನು ಪತ್ತೆ ಮಾಡಿದ. ಈ ಕ್ರಿಯಾ ಸರಣಿಯೂ ಒಂದು ಚಕ್ರೀಯ ಪಥದಲ್ಲಿ ನಡೆಯುವುದರಿಂದ ಮತ್ತು ಈ ಚಕ್ರದಲ್ಲಿ ಸಿಟ್ರಿಕ್ ಆಮ್ಲ ಒಂದು ಮುಖ್ಯ ಹಂತವಾದುದರಿಂದ ಈ ಚಕ್ರೀಯ ಕ್ರಿಯಾ ಸರಣಿಗೆ ಸಿಟ್ರಿಕ್ ಆಮ್ಲ ಚಕ್ರ ಅಥವಾ ಕ್ರೆಬ್ಸ್ ಚಕ್ರ ಎಂದು ಹೆಸರು ಬಂದಿದೆ.  ದೇಹದಲ್ಲಿ ಶಕ್ತಿ ಉತ್ಪಾದನೆಯ ಪ್ರಮುಖ ಹಂತವೆಂದು ಈಗ ಸ್ಥಿರಪಟ್ಟಿರುವ ಈ ಸಿಟ್ರಿಕ್ ಆಮ್ಮ ಚಕ್ರವನ್ನು ಕಂಡುಹಿಡಿದುದಕ್ಕಾಗಿಯೇ ಕ್ರೆಬ್ಸ್‍ನಿಗೆ ನೊಬೆಲ್ ಬಹುಮಾನದ ಒಂದು ಪಾಲು ದೊರೆತದ್ದು. ಕ್ರೆಬ್ಸ್ ಚಕ್ರದ ವಿಶದೀಕರಣಕ್ಕೆ ನೆರವಾಗುವ ಅಮೂಲ್ಯ ಸಂಶೋಧನೆಗಳನು ನಡೆಸಿದ ಲಿಪ್‍ಮನ್ ಆ ಬಹುಮಾನದ ಉಳಿದೊಂದು ಪಾಲನ್ನು ಪಡೆದ.

	ಇನ್ನೂ ಅನೇಕ ಜೀವ ರಾಸಾಯನಿಕ ಕ್ರಿಯೆಗಳ ಪದಗಳನ್ನು ಪೂರ್ತಿಯಾಗಿ ಇಲ್ಲವೇ ಭಾಗಶಃ ಕ್ರೆಬ್ಸ್ ಪತ್ತೆ ಮಾಡಿರುವನಾದರೂ ಸಿಟ್ರಿಕ್ ಆಮ್ಲ ಚಕ್ರದ ಆವಿಷ್ಕಾರ ಅವನಿಗೆ ಅತ್ಯಂತ ಹೆಚ್ಚಿನ ಕೀರ್ತಿಯನ್ನು ತಂದು ಕೊಟ್ಟಿದೆ ಎಂದು ಹೇಳಬಹುದು.
(ನೋಡಿ- ಕ್ರೆಬ್ಸ್-ಚಕ್ರ) 
(ನೋಡಿ- ಕ್ರೆಬ್ಸ್-ಯೂರಿಯಾ-ಚಕ್ರ)              					(ಜೆ.ಆರ್.ಎಲ್.; ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ